KPSC Recruitment: ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ನೇಮಕಾತಿ ಅಪ್‌ಡೇಟ್
ಈ ಕುರಿತು ರಮಣದೀಪ್ ಚೌಧರಿ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಈ ಹುದ್ದೆಗಳ ವಿದ್ಯಾರ್ಹತೆ ವಯೋಮಿತಿ, ಮೀಸಲಾತಿ ಅರ್ಜಿ ಶುಲ್ಕ ಇತ್ಯಾದಿ ವಿವರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದಿನಾಂಕ 20-09-2024ರ ಅಧಿಸೂಚನೆಯನ್ನು ನೋಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಇಲಾಖೆ 'ಸಿ' ವೃಂದದ ನೇಮಕಾತಿ: ಸ್ಪಷ್ಟನೆಗಳು
ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ಕರ್ನಾಟಕ ಲೋಕಸೇವಾ ಆಯೋಗದ ದಿನಾಂಕ 20-09-2024ರ ಅಧಿಸೂಚನೆಯಲ್ಲಿ ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ 86 ಮತ್ತು ಸಹಾಯಕ ಕೃಷಿ ಅಧಿಕಾರಿ 586 ಉಳಿಕೆ ಮೂಲ ವೃಂದದ ಹುದ್ದೆಗಳ ಭರ್ತಿಗೆ ಅಧಿಸೂಚನೆ ಜಾರಿ ಮಾಡಿ ಅರ್ಜಿ ಸಲ್ಲಿಕೆಯ ದಿನಾಂಕವನ್ನು 07-10-2024 ರಿಂದ 07-11-2024ರವರೆಗೆ ನಿಗದಿಪಡಿಸಲಾಗಿತ್ತು.
ಆದರೆ ಸರ್ಕಾರವು ದಿನಾಂಕ 18-09-2024ರಂದು ಜಾರಿ ಮಾಡಿದ ಕ್ರೀಡಾ ಸಾಧಕ ಅಭ್ಯರ್ಥಿಗಳ ಮೀಸಲಾತಿಯನ್ನು ಸದರಿ ಹುದ್ದೆಗಳಿಗೂ ಅಳವಡಿಸಿಕೊಳ್ಳಬೇಕಾದ್ದರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆಯನ್ನು ಮುಂದೂಡಲಾಗಿರುತ್ತದೆ ಎಂದು ಕೆಪಿಎಸ್‌ಸಿ ಹೇಳಿದೆ.
ಪ್ರಸ್ತುತ ಸರ್ಕಾರದ ಸುತ್ತೋಲೆ ದಿನಾಂಕ 04-12-2024ರಲ್ಲಿ ಕ್ರೀಡಾ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 19770 ನಿಯಮ 098 ತಿದ್ದುಪಡಿ ಮಾಡಿರುವುದನ್ನು ಪುನರ್ ಪರಿಶೀಲಿಸಲಾಗುತ್ತಿರುವುದರಿಂದ ರಾಜ್ಯ ಸಿವಿಲ್ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇಕಡಾ 2ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಹೊರಡಿಸಲಾಗಿರುವ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ ಎಂದು ಎಲ್ಲಾ ನೇಮಕಾತಿ ಪ್ರಾಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಈಗಾಗಲೇ ದಿನಾಂಕ 20-09-2024ರಂದು ಜಾರಿ ಮಾಡಲಾಗಿರುವ ಅಧಿಸೂಚನೆಯಲ್ಲಿನ ಮೀಸಲಾತಿ ವರ್ಗೀಕರಣದ ಅನ್ವಯ ಆಯ್ಕೆ ಪ್ರಕ್ರಿಯೆಯನ್ನು ಮುಂದುವರೆಸಲಾಗುತ್ತಿದೆ. ಅರ್ಜಿ ಸಲ್ಲಿಕೆಯ ಪ್ರಾರಂಭಿಕ ದಿನಾಂಕ ಮತ್ತು ಕೊನೆಯ ದಿನಾಂಕಗಳನ್ನು ಕೆಳಕಂಡಂತೆ ಮರು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ಪ್ರಾರಂಭಿಕ ದಿನಾಂಕ 03-01-2025, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-02-2025. ದಿನಾಂಕ 20-09-2024ರ ಅಧಿಸೂಚನೆಯಂತೆ ಕೃಷಿ ಅಧಿಕಾರಿ ಹುದ್ದೆಗೆ 43,100-83,900 ರೂ. ವೇತನ ನಿಗದಿ ಮಾಡಲಾಗಿದೆ. ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ವೇತನ 40,900-78,200 ರೂ.ಗಳು.
ಅರ್ಜಿ ಸಲ್ಲಿಕೆ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ ವಯೋಮಿತಿ 18 ವರ್ಷಗಳು. ರಾಜ್ಯ ಸರ್ಕಾರದ ದಿನಾಂಕ 10/9/2024ರಂದು ಜಾರಿ ಮಾಡಿರುವ ಆದೇಶದಲ್ಲಿ ಎಲ್ಲಾ ಪ್ರವರ್ಗಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ವಯೋಮಿತಿಯಲ್ಲಿ 3 ವರ್ಷದ ಸಡಿಲಿಕೆ ನೀಡಲಾಗಿದೆ. ಅದನ್ನು ಅಳವಡಿಸಿಕೊಂಡ ನಂತರ ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆ 38 ವರ್ಷಗಳು, ಪ್ರವರ್ಗ 2ಎ/ 2ಬಿ/ 3ಎ/ 3ಬಿ 41 ವರ್ಷಗಳು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 43 ವರ್ಷಗಳು.
ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಓದಿ ಅರ್ಥೈಸಿಕೊಂಡು ಆ ನಂತರವೇ ತಮಗೆ ಅನ್ವಯವಾಗುವ ವಿವರಗಳನ್ನು ಭರ್ತಿ ಮಾಡಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅರ್ಜಿಯಲ್ಲಿ ವಿವರಗಳನ್ನು ತಿದ್ದುಪಡಿ/ ಸೇರ್ಪಡೆ ಮಾಡುವಂತೆ ನೀಡುವ ಯಾವುದೇ ಮನವಿಗಳನ್ನು ತಿರಸ್ಕರಿಸಲಾಗುವುದು ಎಂದು ಅಧಿಸೂಚನೆ ಹೇಳಿದೆ.
ಅಭ್ಯರ್ಥಿಗಳು ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಾಗೂ ಅರ್ಜಿಯಲ್ಲಿ, ಕೋರಿರುವ ಎಲ್ಲಾ ಮೀಸಲಾತಿ ಪ್ರಮಾಣ ಪತ್ರ ಇತರೆ ಪ್ರಮಾಣ ಪತ್ರಗಳನ್ನು ತಮ್ಮ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಸೂಚಿಸಿರುವ ನಮೂನೆಗಳಲ್ಲಿಯೇ ಕಡ್ಡಾಯವಾಗಿ ಪಡೆದಿಟ್ಟುಕೊಂಡು ಸದರಿ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡತಕ್ಕದ್ದು.
ಅರ್ಜಿ ಸಲ್ಲಿಸುವ ಸಮಯದಲ್ಲಿ, ಮೀಸಲಾತಿಯನ್ನು ಕೋರದೆ ತದನಂತರದಲ್ಲಿ, ಮೀಸಲಾತಿಯನ್ನು ಪರಿಗಣಿಸುವಂತೆ ಕೋರಿ ಸಲ್ಲಿಸುವ ಮನವಿ/ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿಗಳನ್ನು Online ಮೂಲಕವೇ ಭರ್ತಿ ಮಾಡಿ, ಭಾವಚಿತ್ರ/ ಸಹಿ/ ವಯೋಮಿತಿ/ ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ ಶುಲ್ಕವನ್ನು ಪಾವತಿಸಬೇಕು. ಶುಲ್ಕ ಪಾವತಿಸದ ದಾಖಲೆಗಳನ್ನು/ ಭಾವಚಿತ್ರ ಸಹಿಯನ್ನು ಅಪ್‌ಲೋಡ್ ಮಾಡದೇ ಇರುವ/ ಅಸ್ಪಷ್ಟ ದಾಖಲೆ ಅಪ್‌ಲೋಡ್ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
Gururaj S Oneindia
source: oneindia.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ