Government Employees: 2025ರಲ್ಲಿಯೇ ಮರು ಜಾರಿಯಾಗಲಿದೆ ಹಳೇ ಪಿಂಚಣಿ ಯೋಜನೆ
ಕೆ. ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗದ ವರದಿ ಜಾರಿ ಬಳಿಕ ಕರ್ನಾಟಕದ ಸರ್ಕಾರಿ ನೌಕರರ ಮತ್ತೊಂದು ಪ್ರಮುಖ ಬೇಡಿಕೆ ಹಳೇ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿ. ಸದ್ಯ ಇರುವ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಎಂದು ಸರ್ಕಾರಿ ನೌಕರರು ಬೇಡಿಕೆ ಇಡುತ್ತಲೇ ಇದ್ದಾರೆ.
ಸರ್ಕಾರ ಈ ಕುರಿತು ವರದಿ ನೀಡಲು ಸಮಿತಿಯೊಂದನ್ನು ರಚನೆ ಮಾಡಿದೆ. 2025ರಲ್ಲಿ ನೌಕರರ ಈ ಬೇಡಿಕೆ ಈಡೇರುವ ವಿಶ್ವಾಸವಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29 ಅವಧಿಯ ಚುನಾವಣೆ ಮುಕ್ತಾಯವಾಗಿದೆ. ಅಧ್ಯಕ್ಷರಾಗಿ ಸಿ. ಎಸ್. ಷಡಾಕ್ಷರಿ ಮರು ಆಯ್ಕೆಯಾಗಿದ್ದಾರೆ. ಸಿ. ಎಸ್. ಷಡಾಕ್ಷರಿ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿಯೇ 2025ರಲ್ಲಿ ಸರ್ಕಾರಿ ನೌಕರರು ಯಾವ ನಿರೀಕ್ಷೆ ಇಟ್ಟುಕೊಳ್ಳಬಹುದು? ಎಂದು ಮಾಹಿತಿ ನೀಡಿದ್ದರು. ಅದರಲ್ಲಿ ಅವರು ಎನ್‌ಪಿಎಸ್ ರದ್ದುಗೊಳಿಸುವ ಭರವಸೆ ನೀಡಿದ್ದರು
.ಸಿ. ಎಸ್. ಷಡಾಕ್ಷರಿ ಮಾತು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮರು ಆಯ್ಕೆಯಾದ ಸಿ. ಎಸ್. ಷಡಾಕ್ಷರಿ ಮೊದಲು ಹಳೇ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಯ ಕುರಿತು ಮಾತನಾಡಿದ್ದಾರೆ. "2025ಕ್ಕೆ ಹಳೇ ಪಿಂಚಣಿ ಯೋಜನೆ ಮರು ಜಾರಿಗೆ ಶತಸಿದ್ಧ. ಹೊಸ ಪಿಂಚಣಿ ಯೋಜನೆ ಬದಲಾಗಿ ಹಳೇ ಪಿಂಚಣಿ ಯೋಜನೆ ಮರು ಜಾರಿಗೆ ಸರ್ಕಾರಕ್ಕೆ ಒತ್ತಡ ಹೇರಿ ಜಾರಿಗೊಳಿಸಲಾಗುವುದು" ಎಂದು ಹೇಳಿದ್ದಾರೆ.
ಸಿ. ಎಸ್. ಷಡಾಕ್ಷರಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಪಿಎಸ್ ರದ್ಧತಿ ಬಗ್ಗೆ ಭರವಸೆ ನೀಡಿದ್ದರು. ಸಂಘದ ಹೋರಾಟದ ಮೇರೆಗೆ ಈಗಾಗಲೇ ಒಪಿಎಸ್ ಅನುಷ್ಠಾನಗೊಂಡಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು, ಡಿಸೆಂಬರ್ 2024ರ ಅಂತ್ಯದಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದ್ದು, ಸರ್ಕಾರದ ಮೇಲೆ ಒತ್ತಡವನ್ನು ತಂದು ಹಳೇ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಿ ಗುರಿ ತಲುಪುವವರೆಗೆ ನಿರ್ಣಾಯಕ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದ್ದರು
.ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿಯೂ ಒಪಿಎಸ್ ಕುರಿತು ಚರ್ಚೆ ನಡೆದಿತ್ತು. ವಿಧಾನಸಭೆಯಲ್ಲಿ ತರೀಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ ಜಿ. ಹೆಚ್. ಕೇಳಿದ್ದ ಪ್ರಶ್ನೆಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಖಿತವಾಗಿ ಉತ್ತರವನ್ನು ನೀಡಿದ್ದರು. ಶಾಸಕರು ಸರ್ಕಾರ ರಚನೆ ಮಾಡಿರುವ ಸಮಿತಿ ಎಷ್ಟು ಸಭೆ ಮಾಡಿದೆ?, ಸದರಿ ಸಮಿತಿಯು ಯಾವಾಗ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಲಿದೆ?. ಸಮಿತಿಗೆ ವರದಿ ನೀಡಲು ಕಾಲಮಿತಿ ನಿಗದಿಪಡಿಸಲಾಗಿದೆಯೇ? ಎಂದು ಪ್ರಶ್ನಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಳೇ ಪಿಂಚಣಿ ಯೋಜನೆ ಮರು ಜಾರಿ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸಲ ಈಗಾಗಲೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ 11/12/2018ರ ಮತ್ತು ದಿನಾಂಕ 1/3/2023ರ ಸರ್ಕಾರಿ ಆದೇಶಗಳನ್ವಯ ರಚಿಸಲಾಗಿರುವ ಸಮಿತಿಯನ್ನು ದಿನಾಂಕ 16/8/2024ರಲ್ಲಿ ಪುನರ್ ರಚಿಸಿ ಆದೇಶಿಸಲಾಗಿದೆ ಎಂದು ಹೇಳಿದ್ದರು. ಸಮಿತಿ ಈಗಾಗಲೇ ಎರಡು ಬಾರಿ ಸಭೆಗಳನ್ನು ನಡೆಸಿದೆ. ಆದರೆ ಸಮಿತಿ ವರದಿ ನೀಡಲು ಕಾಲಮಿತಿ ನಿಗದಿ ಮಾಡಿಲ್ಲ ಎಂದು ಹೇಳಿದ್ದರು
.ಸರ್ಕಾರಿ ನೌಕರರು ಒಪಿಎಸ್ ಮರು ಜಾರಿ ಕುರಿತು 7ನೇ ರಾಜ್ಯ ವೇತನ ಆಯೋಗಕ್ಕೂ ಮನವಿ ಸಲ್ಲಿಸಿದ್ದರು. ಈ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಈ ಕುರಿತು ತೀರ್ಮಾನ ಕೈಗೊಳ್ಳಲು ಸರ್ಕಾರ ಈಗಾಗಲೇ ಸಮಿತಿ ರಚನೆ ಮಾಡಿರುವುದರಿಂದ ಆಯೋಗ ಈ ಕುರಿತು ನಿರ್ಧಾರ ಕೈಗೊಳ್ಳುವ ಆಯ್ಕೆಯನ್ನು ಆರ್ಥಿಕ ಇಲಾಖೆಗೆ ನೀಡಿತ್ತು. ಆದಷ್ಟು ಬೇಗ ಈ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಮಾತ್ರ ಶಿಫಾರಸು ಮಾಡಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ